ಕಥೆಗಳು

Tuesday, February 16, 2010

ಚರ್ಚೆಸಾಕು ಚಿಕಿತ್ಸೆ ಬೇಕು


ಚರ್ಚೆ ಸಾಕು ಚಿಕಿತ್ಸೆಬೇಕು
ಮಾತು ಮಾತು ಎಲ್ಲೆಡೆ ಬರೀ ಮಾತು
ಅಂತರ್ಜಲ ಬತ್ತಿತೆಂಬ ಮಾತು
ಗಣಿಗಾರಿಕೆಯಿಂದ ಭೂಗರ್ಭ ಬರಿದಾಯಿತೆಂಬ ಮಾತು,
ಕ್ಷಿಪಣಿಗಳ ಹಾರಿಸಿದ್ದು ರಾಸಾಯನಿಕಗಳ ಭುವಿಗೆ ಸುರಿದಿದ್ದು,
ಹೈಟೆಕ್ ರೋಗಾಣುಗಳ ತೇಲಾಡಿಸಿದ್ದು
ಅದು ಇದು ಎಂದೆಲ್ಲಾ ಆಡಿದ್ದೇ ಹಾಡಿದ್ದು.
ಮನುಕುಲದ ಉದ್ದಾರಕ್ಕೆ ಮುಗ್ಧಜೀವಿಗಳ ಬಲಿಕೊಟ್ಟದ್ದು
ಹಿಮವಂತನ ಟೋಪಿ ಮಾಯವಾದದ್ದು
ಓಜೋನ್ ರಕ್ಷಾಕವಚವೇ ತೂತಾಗಿದ್ದು
ಅಂಟಾರ್ಟಿಕಾದಲ್ಲಿ ಹುಲ್ಲುಬೆಳದದ್ದು
ಹಿಮಗರಡಿ ಮಾಯವಾಗುತ್ತಿರುವುದು
ಹೀಗೆ ಒಂದೇ ಎರಡೇ ನೂರಾರು ಮಾತುಗಳ
ಕೇಳಿ ಸಾಕಾದ ಗ್ರೀನ್ ಪೀಸ್ ಐಫೆಲ್ ಗೋಪುರದ ಮೇಲೆ
ತೂಗುಹಾಕಿದ್ದಮಾತು
ಚರ್ಚೆ ಸಾಕು ಚಿಕಿತ್ಸೆಬೇಕು




ವಿಪರ್ಯಾಸ

ನೆಲ ಜಲ ಗಾಳಿಗಳಲ್ಲಿ ಕಸ ತುಂಬಿದ ನರ ಚೀರುತ್ತಿದ್ದಾನೆ
ಬೇಡಿ ಚೆಲ್ಲಬೇಡಿ ಅಂತರಿಕ್ಷದಲ್ಲಿ ಕಸ ಹಾಕಬೇಡಿ
ಎಂದು ಅರಚುತ್ತಿದ್ದಾನೆ
ಮನೆಯ ಮುಂದೆ ಪಟಾಕಿಹೊಡೆದ ಪೋರನಿಗೆ
ಮಾಲಿನ್ಯದ ಪಾಠ ಹೇಳುವ ಬುದ್ಧಿಜೀವಿಯ ಬುದ್ಧಿ
ಚೀನಾ ಅಂತರಿಕ್ಷದಲ್ಲಿ ಉಪಗ್ರಹ ಸಿಡಿಸಿದಾಗ
ಲದ್ದಿ ತಿನ್ನಲು ಹೋಗಿತ್ತೇ?

Sunday, June 1, 2008

ಶತಮಾನಗಳೇನು ಸಹಸ್ರಮಾನಗಳಿಗೂ ಹಳೆಯದು
ಬೆಳಕಿನಕಕ್ಷೆಗೆ ಬಂದವರನು ತೋಳತೆಕ್ಕೆಗೆ ತೆಗೆದು
ಜಗಮಗಿಸುತ್ತಿದೆ. ಧೂಳು ಅಡರಿದೆ ಕಿಟ್ಟಮುಸುಗಿದೆ
ಎಣ್ಣೆತೀರಿದೆಯಾದರೂ ಬಿರುಗಾಳಿಗೂ ಜಗ್ಗದಹಣತೆ
ಇಂದಿನವರೆಗೂ ಉರಿಯುತ್ತಿದೆ

ಬೆನ್ ಯಹೂದ

ಬೆನ್ ಯಹೂದ ಕೊಟ್ಟಕರೆಗೆ ಜಗತ್ತಿನ ಮೂಲೆಮೂಲೆಗಳಲ್ಲಿ ಪ್ರತಿಧ್ವನಿ ,
ಇಸ್ರೇಲಿನ ಹಕ್ಕಿ ಮರಳಿತು ಗೂಡಿನೆಡೆಗೆ
ಹಳೆಯಹಾಡಿಗೆ ಹೊಸರಾಗ ಮೂಡಿತ್ತು ಚಿಂದಿಗಳಲ್ಲಿ ನಿಘಂಟು

ಅರಬರ ಕಪಿಮುಷ್ಟಿಯಲ್ಲಿ ನಲುಗಿದ್ದಕ್ಕಿಂತ ಸಂಪ್ರದಾಯದ ಬೇಗೆಯಲಿ ನವೆದಿತ್ತು ಜೀವ
ಆಸೆಚಿಗುರಿತು ಬೀಜಬಲಿಯಿತು ಚಿಂತನೆಗೆ ಗರಿಮೂಡಿತ್ತು ಡೀರ್ ನೊಂದಿಗೆ
ನೈರಾಶ್ಯದ ಚಂಡಮಾರುತದಲ್ಲೂ ಆಶಾದೀಪ ತೇಲಿಬಂದಿತ್ತು
ಸಾಗರದ ತೀರಕ್ಕೆ . ಜಗದ ಜನಮಾನಸ ಎಲ್ಲಿದ್ದರೂ ಒಂದೇ ....
ದೇಶ ಭಾಷೆಗೆಂದು ದುಡಿದ ಜೀವಿಗಳ ಜೀವಿತವೇ ಪ್ರಶ್ನೆಯಾದಾಗ ಜೀವಮುದುಡಿ
ದೀಪ ಆರುತ್ತದೆಯಾದರೂ ಪ್ರಯತ್ನ ಹುಸಿಯಾಗಲಿಲ್ಲ ಮತ್ತೆಹೊತ್ತಿತ್ತು ಹೀಬ್ರೂಹಣತೆ.



ಕಾಲ

ಅಂದು ಬೆಳ್ಳಂ ಬೆಳಗ್ಗೆ ವಾಯುವಿಹಾರ ಮಸಣದ ಹತ್ತಿರ
ಯಾರೋ ಮಿಸುಕಾಡಿದಂತೆ ಮೈಯೆಲ್ಲಾ
ಜುಂ ಎಂದಿತು ಒಂದು ಕ್ಷಣ !
ಸಮಾಧಿಯಿಂದ ಎದ್ದುಬಂದ ಶುಭ್ರವೇಷಧಾರಿ
ಅವನಿಗೊಂದೇ ಕುತೂಹಲ ಇದು ಯಾವಕಾಲ ? ಯಾರಕಾಲ ?
ನನ್ನ ಉತ್ತರ ಸದಾ ಸಿದ್ಧ ಎರಡುಸಾವಿರದ ಐದು ಗತಕಲಿ
ಆದರೆ ಕಾಲ ಉಳ್ಳವನದು. ಕೇಳಿದನವ ಅಚ್ಚರಿಯಲಿ ಓಹೋ !
ಮತ್ತೆ ಪ್ರಶ್ನೆ ಅಂದಿನ ಹೋರಾಟದಲಿ ಗೆದ್ದವರಾರು ,
ಯಾವ ಹೋರಾಟ ? ಬಿಡಿಸಿಹೇಳು ಎಂದೆ
ತುಂಡು ಪಂಚೆಯ ಫಕೀರ ಬಿಳೀ ತೊಗಲಿನವರೊಡನೆ ಹೂಡಿದ ಸಮರ
ಗೆಲುವು ನಮ್ಮದೆ ಆದರೂ ಅಂದಿನಿಂದ ಇಂದಿನತನಕ ಸೋಲೇ ಕಾಡುತ್ತಿದೆ
ವೇಷ , ಭಾಷೆ , ಸಂಸ್ಕೃತಿಗಳ ಅನುಕರಣೆಯಲ್ಲಿ ಅನುಸರಣೆಯಲ್ಲಿ
ನಮ್ಮ ನಾವೇ ಮರೆತು ಮತ್ತೆಗುಲಾಮರಾಗಿದ್ದೇವೆ .. ... .. ಮಾತು ಮುಗಿಯುವಮುನ್ನ
ಮತ್ತೇನೋ ಮಿಸುಕಾಡಿತು , ನೋಡಲು ಬೂಟುಕಾಲ ಸಿಪಾಯಿ
ಬಂದವನೇ ನಿನ್ನ ಮಾತು ಮುಗಿಯಿತೆ ಎಂದನಷ್ಟೇ
ಅತ್ತ ತಿರುಗಿ ಅಣ್ಣ ನಮ್ಮ ಕಾಲವೇ ಚೆನ್ನ !
ನಿನ್ನದಕ್ಕೆ ನೀನು ನನ್ನದಕ್ಕೆ ನಾನು ನಿಷ್ಠೆ ತೋರಿ ಪ್ರಾಣ ಬಿಟ್ಟೆವು.
ಇಂದಿನವರಿಗೆ ಅದರ ಗಂಧ ತಿಳಿಯದು . ನಡಿ ನಡಿ ಹೊತ್ತಾಯಿತು !!
ನೆಸರವದೋ ಮೂಡಿತು . ನಾನೂ ಹೊರಟೆ ಮನೆಯೆಡೆಗೆ ,
ಅವರು ಸಮಾಧಿಯೆಡೆಗೆ ನೆಲದ ದುಸ್ಥಿತಿಗೆ ಮರುಗುತ .

Sunday, May 25, 2008

ಕೆಲವರಿರುತ್ತಾರೆ ರಸ್ತೆಯ ಎಡ - ಬಲ

ನೋಡುತ್ತಾ ದಾಟಲಾಗದೆ , ಮತ್ತೆ ಕೆಲವರು

ಎಡ - ಬಲವ ನೋಡದೆ ಮುನ್ನುಗ್ಗುತ್ತಾರೆ

ಕೇವಲ ರಸ್ತೆಯೇನು ಲೋಕವನ್ನೇ

ದಾಟಿಬಿಟ್ಟಿರುತ್ತಾರೆ .

ಅನುಗಾಲ ನಿನ್ನ ನಾಮವೆನ್ನ ನಾಲಿಗೆಯಲಿರುವಾಗ

ಕಣ್ಣಿನಲಿ ನಿನ್ನ ರೂಪವೇ ನಿಂದಿರುವಾಗ

ಮನದೊಳಗೆ ನೀನೆ ತುಂಬಿರುವಾಗ

ನಿನ್ನವರ ಸಹವಾಸ ಎನಗಿರುವಾಗ

ಏನಬೇಡಲಿ ಪ್ರಭುವೆ ಎಲ್ಲವನು ನೀಡಿರುವೆ ಆದರೂ

ಬಾಗಿಲಿಗೆ ಬಂದಿಹೆನು ಸೆರಗೊಡ್ಡಿ ನಿಂದಿಹೆನು

ಕಷ್ಟದಲಿ ಎದೆಗೆಡದಂತೆ ,

ಸುಖದಲ್ಲಿ ಉನ್ಮತ್ತನಾಗದಂತೆ

ಹರಸು ನೀನು ಹೇ ಪ್ರಭುವೆ

ನಾ ಹಾದಿ ಬಿಡದಂತೆ .

ನೆಮ್ಮದಿ ಎಲ್ಲಿಹುದೋ ಮರುಳೆ
ಬರಿಯ ಶಾಸ್ತ್ರವ ಕೇಳಿದರೆ ದೊರಕಲುಬಹುದೇ
ನಾಕುದಿನದ ಸಂಸಾರ ತೊರೆವಮುನ್ನ
ನಿನ್ನ ನೀನು ಅರಿಯುವ ಮುನ್ನ
ಸಕಲ ಭ್ರಮೆಯು ತೊಲಗುವಮುನ್ನ .